ಖುಲ್ನಾ-
ಬಾಂಗ್ಲಾದೇಶದ ಒಂದು ನಗರ. ಖುಲ್ನಾ ವಿಭಾಗದ ಮತ್ತು ಜಿಲ್ಲೆಯ ಮುಖ್ಯಪಟ್ಟಣ. ಭೈರಬ್ ನದಿಯ ದಂಡೆಯ ಮೇಲಿದೆ. ಇದೊಂದು ಮುಖ್ಯ ನದಿಬಂದರು, ವ್ಯಾಪಾರಕೇಂದ್ರ. ಇಲ್ಲಿಂದ ಜೆಸ್ಸೂರಿನ ಮುಖಾಂತರ ಭಾರತದ ಕಲ್ಕತ್ತಕ್ಕೆ ರೈಲ್ವೆ ಮತ್ತು ರಸ್ತೆ ಸಂಪರ್ಕವಿದೆ. ಜೆಸ್ಸೂರ್-ದರ್ಶನ ರೈಲ್ವೆಯ ಒಂದು ಮುಖ್ಯನಿಲ್ದಾಣವಾದ ಖುಲ್ನಾಗೂ ದಾಂಗ್ಲಾದೇಶದ ಇತರ ಮುಖ್ಯ ಸ್ಥಳಗಳಿಗೂ ಭೂಜಲ ಸಾರಿಗೆಮಾರ್ಗಗಳಿವೆ. ಸುಮಾರು (3) ಮೈ. ದಕ್ಷಿಣಕ್ಕೆ ಕಾಜಿûಬಾಚಾ ನದಿಯ ಮೇಲೆ ನಿರ್ಮಾಣವಾಗಿರುವ ನೌಕಾಂಗಣ, (18) ಮೈ.ದಕ್ಷಿಣಕ್ಕೆ ಹೊಸದಾಗಿ ನಿರ್ಮಿತವಾದ ಚಲ್ನಾ ಬಂದರು-ಇವುಗಳಿಂದಾಗಿ ಖುಲ್ನಾದ ಜಲಸಾರಿಗೆ ವಿಶೇಷವಾಗಿ ವರ್ಧಿಸಿದೆ. ಖುಲ್ನಾ ಒಂದು ಮುಖ್ಯಕೈಗಾರಿಕಾಕೇಂದ್ರ ಕೂಡ ಹೌದು. ಸುಂದರಬನಗಳ ಅರಣ್ಯೋತ್ಪನ್ನವನ್ನಾಧರಿಸಿದ ಬೆಂಕಿಕಡ್ಡಿ ಕಾರ್ಖಾನೆಗಳೂ ಹತ್ತಿ ಸಣಬು ಮತ್ತು ಎಣ್ಣೆಗಿರಣಿಗಳೂ ಇಲ್ಲಿವೆ. ಪಾಕಿಸ್ತಾನದಿಂದ ಬಿಡುಗಡೆ ಹೊಂದಲು ಬಾಂಗ್ಲಾದೇಶ ಹೂಡಿದ ಹೋರಾಟದಲ್ಲಿ ಪ್ರಧಾನ ಮಂತ್ರಿ ಪಾತ್ರ ವಹಿಸಿದ ನಗರಗಳಲ್ಲಿ ಖುಲ್ನಾ ಒಂದು. ಜನಸಂಖ್ಯೆ (1,27,970) (1961).

	ಖುಲ್ನಾ ಜಿಲ್ಲೆಯ ವಿಸ್ತೀರ್ಣ 4,652) ಚ. ಮೈ. ಜನಸಂಖ್ಯೆ (24,48,729) (1961). ಜೆಸ್ಸೂರಿನಿಂದ ಪ್ರತ್ಯೇಕಿಸಿ ಈ ಜಿಲ್ಲೆಯನ್ನು ರಚಿಸಲಾದ್ದು (1882)ರಲ್ಲಿ. ಇದು ಮೆಕ್ಕಲು ಮಣ್ಣಿನಿಂದಾಗಿರುವ ಪ್ರದೇಶ. ಇಲ್ಲಿ ಅನೇಕ ನದಿಗಳು ಹರಿಯುತ್ತವೆ. ಜಿಲ್ಲೆಯ ವಾಯುವ್ಯ ಭಾಗ ಉಳಿದ ಪ್ರದೇಶಕ್ಕಿಂತ ಎತ್ತರವಾಗಿದೆ. ಆಗ್ನೇಯ ಭಾಗ ತಗ್ಗು, ಜವುಗು; ಸುಂದರಬನಗಳಿಂದ ಕೂಡಿದೆ. ಇಲ್ಲಿ ಬೇಸಾಯ ಅಸಾಧ್ಯ; ಜನರಿಲ್ಲ. ಅಕ್ಕಿ, ಎಣ್ಣೆಬೀಜ, ಸಣಬು ಇಲ್ಲಿಯ ಮುಖ್ಯ ಬೆಳೆಗಳು ನೀರಾವರಿ ಸೌಲಭ್ಯ ವಿಸ್ತರಿಸುತ್ತಿದೆ.

	ಖುಲ್ನಾ ವಿಭಾಗದ ವಿಸ್ತೀರ್ಣ (12,810) ಚ. ಮೈ. ಜನಸಂಖ್ಯೆ (1,00,66,900) (1961). ಖುಲ್ನಾ, ಜೆಸ್ಸೂರ್, ಕುಷ್ಟಿಯ, ಬಾರಿಸಾಲ್ ಇವು ಈ ವಿಭಾಗದಲ್ಲಿರುವ ಜಿಲ್ಲೆಗಳು.			     (ಕೆ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ